ಕ್ರೈಸ್ಟ್‍ಚರ್ಚ್

ನ್ಯೂಜಿಲೆಂಡಿನ ಕ್ಯಾಂಟರ್‍ಬೆರಿ ಪ್ರಾಂತೀಯ ಜಿಲ್ಲೆಯ ಆಡಳಿತ ಕೇಂದ್ರ. ದಕ್ಷಿಣ ದ್ವೀಪದ (ಸೌತ್ ಐಲೆಂಡ್) ಪೂರ್ವತೀರದಲ್ಲಿ, ಬ್ಯಾಂಕ್ಸ್ ಪರ್ಯಾಯದ್ವೀಪದ ಉತ್ತರಕ್ಕಿದೆ. ಇದು ನ್ಯೂಜಿಲೆಂಡಿನ ಎರಡನೆಯ ದೊಡ್ಡ ನಗರ (ಮೊದಲನೆಯದು ಆಕ್‍ಲೆಂಡ್). ಇದರ ಉಪನಗರಗಳೂ ಸೇರಿದಂತೆ ಈ ನಗರದ ಜನಸಂಖ್ಯೆ 2,20,510 (1961). ಒಮ್ಮೆ ಜ್ವಾಲಾಮುಖೀಯ ದ್ವೀಪವಾಗಿದ್ದ ಬ್ಯಾಂಕ್ ಪರ್ಯಾಯದ್ವೀಪದ ಮೆಕ್ಕಲುಮಣ್ಣಿನಿಂದ ಕೂಡಿದ ಕ್ಯಾಂಟರ್‍ಬರಿ ಮೈದಾನದಲ್ಲಿ ಈ ನಗರವಿದೆ. ಆಯಾಕಾರದಲ್ಲಿ ನಿರ್ಮಿಸಲಾದ ಈ ನಗರವನ್ನು ಉದ್ಯಾನ ನಗರ ಅಥವಾ ಮೈದಾನದ ನಗರ ಎಂದೂ ಕರೆಯುವುದುಂಟು. ಗಾತ್ರದಲ್ಲಿ ಸಣ್ಣದಿದ್ದರೂ ಬಹು ಆಕರ್ಷಕವಾಗಿರುವ ಏವನ್ ನದಿ ಈ ನಗರದ ಮೂಲಕ ಹರಿಯುತ್ತದೆ. ಸುಂದರವಾದ ಉದ್ಯಾನಗಳೂ ತೋಟಗಳೂ ಅಭಯಾರಣ್ಯಗಳೂ ವಿಹಾರ ಸ್ಥಳಗಳೂ ಈ ನಗರದ ಎಂಟನೆಯ ಒಂದು ಭಾಗದಷ್ಟು ಸ್ಥಳವನ್ನು ಆವರಿಸಿಕೊಂಡಿವೆ. ನಗರದ ಮುಖ್ಯಸ್ಥಳ ಕೆಥೀಡ್ರಲ್ ಚೌಕ. ಸರ್ ಗೈಲ್ಸ್ ಗಿಲ್ಬರ್ಟ್ ಸ್ಕಾಟ್ (1811-1878) ರೂಪಿಸಿದ ಆಲೇಖ್ಯಗಳ ಪ್ರಕಾರ ಗೋಥಿಕ್ ಮಾದರಿಯಲ್ಲಿ ನಿರ್ಮಿತವಾಗಿರುವ ಆಂಗ್ಲಿಕನ್ ಕೆಥೀಡ್ರಲ್ ಈ ಚೌಕದಲ್ಲಿದೆ. ಇದರ 240' ಎತ್ತರದ ಮಿನಾರು ಪ್ರಧಾನವಾಗಿ ಎದ್ದು ಕಾಣಿಸುತ್ತದೆ. ಸೇಕ್ರೆಡ್ ಹಾರ್ಟ್ ಕಾನ್ವೆಂಟಿಗೆ ಸೇರಿದ ಒಂದು ರೋಮನ್ ಕೆಥೊಲಿಕ್ ಪ್ರೋಕೆಥೀಡ್ರಲ್ ಸಹ ಇಲ್ಲಿದೆ. ನ್ಯೂಜಿಲೆಂಡಿನ ಪ್ರಮುಖ ಶಿಕ್ಷಣಕೇಂದ್ರಗಳಲ್ಲಿ ಕ್ರೈಸ್ಟ್ ಚರ್ಚೂ ಒಂದು. ಕ್ರೈಸ್ಟ್ ಕಾಲೇಜ್, 1873ರಲ್ಲಿ ಸ್ಥಾಪಿತವಾದ ಕ್ಯಾಂಟರ್‍ಬೆರಿ ವಿಶ್ವವಿದ್ಯಾಲಯ ಮುಂತಾದವುಗಳ ಹಳೆಯ ಮತ್ತು ಸುಂದರ ಕಟ್ಟಡಗಳು ಇಲ್ಲುಂಟು. ಸಸ್ಯಶಾಸ್ತ್ರಕ ಉದ್ಯಾನ ಮತ್ತು ಹ್ಯಾಗ್ಲಿ ಉದ್ಯಾನಗಳ ಬಳಿಯಲ್ಲಿ ರಾಬರ್ಟ್ ಮೆಕ್‍ಡೂಗಲ್ ಚಿತ್ರಶಾಲೆಯೂ ಕ್ಯಾಂಟರ್‍ಬೆರಿ ವಸ್ತುಸಂಗ್ರಹಾಲಯವೂ ಇವೆ. ಕ್ಯಾಂಟರ್‍ಬೆರಿ ವಸ್ತು ಸಂಗ್ರಹಾಲಯದಲ್ಲಿ ದೇಶೀಯ ಹಕ್ಕಿಗಳನ್ನು ಸಂಗ್ರಹಿಸಲಾಗಿದೆ. ನಿರ್ವಂಶವಾದ ಮೋವ ಹಕ್ಕಿಯ ಅವಶೇಷಗಳನ್ನಿಡಲಾಗಿದೆ. ಹಳೆಯ ಕಾಲದ ಕ್ರೈಸ್ಟ್‍ಚರ್ಚಿನ ಬೀದಿಯೊಂದರ ಪಡಿಯಚ್ಚೂ ನಕ್ಷತ್ರಮಂದಿರವೂ (ಪ್ಲಾನೆಟೋರಿಯಂ) ಇಲ್ಲಿವೆ. ನಗರದ ಇತರ ಕಟ್ಟಡಗಳ ಪೈಕಿ ಪ್ರಿನ್ಸೆಸ್ ಮಾರ್ಗರೆಟ್ ಆಸ್ಪತ್ರೆಯೂ ಸರ್ಕಾರಿ ಕಚೇರಿ ಭವನಗಳೂ ಮುಖ್ಯವಾದವು.

	ಲಿಟಲ್‍ಟನ್ ಇಲ್ಲಿಯ ಪ್ರಮುಖ ಬಂದರು. ಇದೊಂದು ಆಳವಾದ ನೈಸರ್ಗಿಕ ಬಂದರು. ವರ್ಷಕ್ಕೆ 15,00,000 ಟನ್‍ಗಳಿಗಿಂತ ಅಧಿಕ ತೂಕದ ಸರಕು ಈ ಬಂದರಿನ ಮೂಲಕ ಸಾಗುತ್ತದೆ. ಉಣ್ಣೆ, ಮಾಂಸ, ಹೈನ ಉತ್ಪನ್ನ, ಗೋದಿ-ಇವು ಮುಖ್ಯ ನಿರ್ಯಾತಗಳು. ಆಯಾತಗಳಲ್ಲಿ ಮುಖ್ಯವಾದವು ಮೋಟಾರ್ ಎಣ್ಣೆಗಳು, ರಾಸಾಯನಿಕ ಗೊಬ್ಬರಗಳು, ತೈಲ, ಕಬ್ಬಿಣ ಮತ್ತು ಉಕ್ಕು.

	ನಗರದ ಮಧ್ಯಭಾಗದಿಂದ ಆರು ಮೈಲಿಗಳ ದೂರದಲ್ಲಿ, ವಾಯುವ್ಯಕ್ಕೆ, ಕ್ರೈಸ್ಟ್ ಚರ್ಚಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇದೆ. ಇದು 1,000 ಎಕರೆಗಳ ಪ್ರದೇಶದಲ್ಲಿ ನಿರ್ಮಿತವಾಗಿದೆ. ಇದು ನ್ಯೂಜಿಲೆಂಡಿನ ಪ್ರಮುಖ ವಿಮಾನ ನಿಲ್ದಾಣಗಳಲ್ಲೊಂದು. ಇಲ್ಲಿಂದ ನ್ಯೂಜಿಲೆಂಡಿನ ಇತರ ನಗರಗಳಿಗೂ ಮೆಲ್ಬರ್ನ್ ಮತ್ತು ಸಿಡ್ನಿಗಳಿಗೂ ವಿಮಾನ ಸಂಪರ್ಕವುಂಟು. ಕ್ರೈಸ್ಟ್‍ಚರ್ಚ್ ನಗರಕ್ಕೂ ವಿಮಾನ ನಿಲ್ದಾಣಕ್ಕೂ ನಡುವೆ ನಾಲ್ಕು ಪಥಗಳ ಹೆದ್ದಾರಿಯಿದೆ. ಇದರಿಂದಾಗಿ ಸರಕು ಸಾಗಣೆಗೆ ಬಹಳ ಅನುಕೂಲವಾಗಿದೆ. ಕ್ರೈಸ್ಟ್‍ಚರ್ಚ್‍ನ ಉತ್ತರಕ್ಕಿರುವ ಬ್ಲೆನ್‍ಇಮ್, ದಕ್ಷಿಣಕ್ಕಿರುವ ಡ್ಯೂನೀಡನ್ ಮತ್ತು ಇನ್ವರ್‍ಕಾರ್ಗಿಲ್ ಮತ್ತು ಪಶ್ಚಿಮಕ್ಕಿರುವ ಗ್ರೇಮೌತ್ ಪಟ್ಟಣಗಳಿಗೂ ಈ ನಗರಕ್ಕೂ ರೈಲು ಮತ್ತು ರಸ್ತೆ ಮಾರ್ಗಗಳಿವೆ.

	ಸಾರಿಗೆ ಸೌಲಭ್ಯ, ಆರ್ಟೀಸಿಯನ್ ಬಾವಿಗಳಿಂದ ಸಮೃದ್ಧಿಯಾದ ಜಲ ಸೌಕರ್ಯ, ಅಗ್ಗದ ವಿದ್ಯುತ್ ಸರಬರಾಯಿ-ಮುಂತಾದ ಅನುಕೂಲಗಳಿಂದಾಗಿ ಕ್ರೈಸ್ಟ್‍ಚರ್ಚ್ ನ್ಯೂಜಿಲೆಂಡಿನ ಎರಡನೆಯ ಪ್ರಮುಖ ಕೈಗಾರಿಕಾ ಕೇಂದ್ರವಾಗಿ ಪರಿಣಮಿಸಿದೆ. ಎರಡನೆಯ ಮಹಾಯುದ್ಧಕ್ಕೆ ಮುಂಚೆ ಸುತ್ತಣ ಫಲವತ್ತಾದ ಕೃಷಿ ಪ್ರದೇಶಗಳನ್ನೇ ಈ ನಗರ ಅವಲಂಬಿಸಿತ್ತು. ಆಗ ಇಲ್ಲಿ ಮಾಂಸ ಶೀತಲೀಕರಣ, ಉಣ್ಣೆ, ಉಪಕರಣ ತಯಾರಿಕೆ ಮುಂತಾದ ಕೆಲವು ಕೈಗಾರಿಕೆಗಳೂ ಇದ್ದುವು. 1945ರ ಅನಂತರ ತೀವ್ರ ಗತಿಯಲ್ಲಿ ಕೈಗಾರಿಕಾಭಿವೃದ್ಧಿಯಾಯಿತು. 1960ರ ವೇಳೆಗೆ ಬಟ್ಟೆ, ಜಮಖಾನೆ, ಮರ ಮತ್ತು ಬೆಂಡಿನ ಉತ್ಪನ್ನಗಳು, ಅಣೆಕಟ್ಟು, ಸಾರಿಗೆ ಉಪಕರಣ-ಮುಂತಾಗಿ 2,200ಕ್ಕೂ ಹೆಚ್ಚು ಕಾರ್ಖಾನೆಗಳು ಬೆಳೆದಿದ್ದುವು.

	ಎಡ್ವರ್ಡ್ ಗಿಬನ್ ವೇಕ್‍ಫೀಲ್ಡನ ಮತ್ತು ಅವನ ನ್ಯೂಜಿಲೆಂಡ್ ಕಂಪೆನಿಯ ಸ್ಫೂರ್ತಿಯಿಂದ ಏರ್ಪಡಿಸಲಾದ ನೆಲಸುನಾಡುಗಳಲ್ಲಿ ಕ್ರೈಸ್ಟ್‍ಚರ್ಚ್ ಕೊನೆಯದು. ಜಾನ್ ರಾಬರ್ಟ್ ಗಾಡ್ಲಿಯ ಪ್ರಯತ್ನದಿಂದಾಗಿ ಕ್ಯಾಂಟರ್‍ಬೆರಿ ಸಂಘದಿಂದ ಇದು ಸ್ಥಾಪಿತವಾಯಿತು (1848). ಇಂಗ್ಲೆಂಡಿನ ಚರ್ಚಿನ ಅನುಯಾಯಿಗಳ ಮಾದರಿ ನೆಲೆಯೊಂದನ್ನು ಸ್ಥಾಪಿಸುವುದು ಆ ಕಂಪನಿಯ ಯೋಜನೆಯಾಗಿತ್ತು. ಆ ಯೋಜನೆಯ ಪ್ರಕಾರ ಇಲ್ಲಿ ನೆಲಸುವ ಉದ್ದೇಶದಿಂದ ಬಂದ ವಲಸೆಗಾರರ ಮೊದಲ ತಂಡ ಲಿಟಲ್‍ಟನ್ನನ್ನು ತಲಪಿದ್ದು 1850ರಲ್ಲಿ.										*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ